ಫತೇಹ್‍ಪುರ್ ಸಿಕ್ರಿ
ಉತ್ತರ ಪ್ರದೇಶದ ಆಗ್ರ ಜಿಲ್ಲೆಯ ಒಂದು ಸ್ಥಳ. ಆಗ್ರದ ನೈಋತ್ಯಕ್ಕೆ ಸುಮಾರು 38 ಕಿಮೀ. ದೂರದಲ್ಲಿ ಉ.ಅ. 270 06' ಮತ್ತು ಪೂ.ರೇ. 770 40' ಮೇಲೆ ಇದೆ. ಇಲ್ಲಿ ಒಂದು ಸಾಮಾನ್ಯ ಗುಡ್ಡದ ಮೇಲೆ ಮೊಗಲ್ ಚಕ್ರವರ್ತಿ ಅಕ್ಬರನ ಕಾಲದಲ್ಲಿ ನಿರ್ಮಿತವಾದ ನಗರದ ಅವಶೇಷವಿದೆ. ಸಿಕ್ರಿ ಎಂಬುದು ಶಿಖರಿ (ಗುಡ್ಡದ ಊರು) ಎಂಬುದರ ರೂಪ. ಫತೇಹ್‍ಪುರದ ನಿರ್ಮಾಣಕ್ಕಿಂತ ಮೊದಲೇ ಇದರ ಬಳಿ ಸಿಕ್ರಿ ಎಂಬ ಹಳ್ಳಿಯಿತ್ತು. 1527ರಲ್ಲಿ ರಜಪೂತ ದೊರೆ ರಾಣಾಸಂಗ್ರಾಮಸಿಂಹನಿಗೂ ಬಾಬರನಿಗೂ ಈ ಸ್ಥಳದ ಹತ್ತಿರ ನಡೆದ ಯುದ್ಧ ಭಾರತದ ಇತಿಹಾಸದಲ್ಲಿ ಒಂದು ನಿರ್ಣಾಯಕ ಘಟನೆಯಾಗಿ ಪರಿಣಮಿಸಿ ಉತ್ತರ ಭಾರತ ಸುಮಾರು ಎರಡು ಶತಮಾನಗಳ ಕಾಲ ಮೊಗಲ್ ಚಕ್ರವರ್ತಿಗಳ ಆಳ್ವಿಕೆಗೆ ಒಳಪಟ್ಟಿತು. ಇದು ಫತೇಹ್‍ಪುರ್ ಸಿಕ್ರಿ ಪ್ರಸಿದ್ಧವಾಗಿರುವುದು ತನ್ನ ಅವಶೇಷಗಳಿಂದಾಗಿ. ಆ ಕಾಲಕ್ಕೆ ವಿಶಾಲ ಭಾರತದಲ್ಲೇ-ಬೇರಾವುದೂ ಇಲ್ಲವೆನಿಸುವಷ್ಟು ವೈಭವದಿಂದ ವಾಸ್ತುಶಿಲ್ಪ ಮತ್ತು ಕಲೆಗಳನ್ನು ಈ ಸ್ಥಳ ಮೆರೆದಿತ್ತು. ಎಲಿಜಬೆತ್ ರಾಣಿಯ ಕಾಲದಲ್ಲಿ ಇಂಗ್ಲಿಷರು ಇಲ್ಲಿಗೆ ಬಂದಾಗ (1583) ಜನಸಂಖ್ಯೆ, ವೈಭವ ಎರಡರಲ್ಲೂ ಲಂಡನ್ನನ್ನೂ ಮೀರಿಸುವ ನಗರವೊಂದನ್ನು ಇಲ್ಲಿ ಕಂಡರೆಂದು ಹೇಳಲಾಗಿದೆ. ಈಗ ಇದೊಂದು ನಿರ್ಜನ ಪ್ರದೇಶ.

ಸಿಕ್ರಿ ಗ್ರಾಮದ ದಕ್ಷಿಣಕ್ಕಿರುವ ಗುಡ್ಡದ ಮೇಲೆ ಸುಮಾರು 12 ಕಿ.ಮೀ. ಸುತ್ತಳತೆಯುಳ್ಳ ಕೆಂಪುಗಲ್ಲಿನ ಕೋಟೆಯೊಳಗೆ ಉತ್ತರ ಪಾಶ್ರ್ವಕ್ಕೆ ಫತೇಹ್‍ಪುರ್ ಅವಶೇಷಗಳಿವೆ. ಕೋಟೆ ಆಗ್ನೇಯ ದಿಕ್ಕಿನೆಡೆ ಬಯಲಿಗೆ ಚಾಚಿಕೊಂಡಂತಿದೆ. ವಾಯುವ್ಯಕ್ಕೆ ಸುಮಾರು 40 ಕಿ.ಮೀ. ಸುತ್ತಳತೆಯಲ್ಲಿ ವಿಶಾಲವಾದ ಕೆರೆಯೊಂದಿದೆ. ಕೆರೆಯ ಅಂಚಿಗೆ ಅಂಟಿಕೊಂಡಂತಿರುವ ಗುಡ್ಡ ತುಂಬ ಕಡಿದಾಗಿದೆ. ಸಿಕ್ರಿ ಗ್ರಾಮದ ಗುಡ್ಡ ಮತ್ತು ಫತೇಹ್‍ಪುರವಿರುವ ಗುಡ್ಡ ಇವೆರಡನ್ನೂ ಕಟ್ಟೆಯೊಂದರಿಂದ ಕೂಡಿಸಿ ಕೆರೆಯನ್ನು ನಿರ್ಮಿಸಲಾಗಿದೆ. ಇಂಥ ಆಯಕಟ್ಟಿನ ಪ್ರದೇಶವನ್ನು ಆರಿಸಿಕೊಂಡು ರಕ್ಷಣಾ ದೃಷ್ಟಿಯಿಂದ ಕೆರೆಯನ್ನೂ ಪಕ್ಕದ ಗುಡ್ಡದ ಸುತ್ತಲೂ ಕೋಟೆ ಮತ್ತು ಅದರೊಳಗೆ ಫತೇಹ್‍ಪುರವನ್ನೂ ನಿರ್ಮಿಸಲಾಗಿದೆ. ರಕ್ಷಣೆಗೆ ಅಪಾಯ ಬಂದಾಗ ಕೆರೆಯ ನೀರನ್ನು ಒಳಕೋಟೆ ಹೊರಕೋಟೆ ಗೋಡೆಗಳ ಸುತ್ತಣ ಕಂದಕಗಳಿಗೆ ಬಿಟ್ಟುಕೊಳ್ಳುತ್ತಿದ್ದ ವ್ಯವಸ್ಥೆ ಕಂಡುಬರುತ್ತದೆ.

ಮೊಗಲ್ ಚಕ್ರವರ್ತಿಗಳಲ್ಲೆಲ್ಲ ದೀರ್ಘಕಾಲ ರಾಜ್ಯವಾಳಿ ಸಾಮ್ರಾಜ್ಯವನ್ನು ಭದ್ರ ಬುನಾದಿಯ ಮೇಲೆ ಕಟ್ಟಿದ ಜಲಾಲ್-ಉದ್-ದೀನ್ ಮೊಹಮ್ಮದ್ ಅಕ್ಬರನೇ ಫತೇಹ್‍ಪುರವನ್ನು (ವಿಜಯನಗರ) ನಿರ್ಮಿಸಿದ. ಅಕ್ಬರನಿಗೆ ಮೂವರು ಹೆಂಡತಿಯರಿದ್ದರೂ ಮಕ್ಕಳಾಗಿರಲಿಲ್ಲ. ಅಜ್ಮೀರಿನಲ್ಲಿ ನೆಲೆಸಿದ್ದ ಹಜರತ್ ಷೇಕ್ ಸಲೀಮ್ ಚಿಷ್ತಿಯ ಆಶೀರ್ವಾದದಿಂದ ರಾಣಿ ಜೋಧಾಬಾಯಿಗೆ ಗಂಡು ಮಗುವೊಂದು ಜನಿಸಿತು. ಅಕ್ಬರ್ ಆ ಮಗುವಿಗೆ ಸಲೀಮ್ ಎಂದು ಹೆಸರಿಟ್ಟ. ಅವನೇ ಮುಂದೆ ಜಹಾಂಗೀರ್ ಎಂಬ ಹೆಸರಿನಿಂದ ಅಕ್ಬರನ ಆನಂತರ ಚಕ್ರವರ್ತಿಯಾದ ಸಲೀಮನ ಜನನದ ಸಂತೋಷದ ನೆನಪಾಗಿ ಫತೇಹ್‍ಪುರವನ್ನು ಕಟ್ಟಲು 1569ರಲ್ಲಿ ಅಕ್ಬರ್ ಪ್ರಾರಂಭಿಸಿ ಸುಮಾರು 1580ರಲ್ಲಿ ಮುಗಿಸಿದನೆನ್ನಲಾಗಿದೆ. 1572ರಲ್ಲಿ ಸತ್ತ ಷೇಕ್ ಸಲೀಮ್ ಚಿಷ್ತಿಯ ಗೋರಿಯೂ ಇಲ್ಲೇ ಇದೆ.

ಆಗ್ರಾ ಕಡೆಯಿಂದ ಬಂದಿಳಿಯುವ ಪ್ರವಾಸಿಗಳ ದೃಷ್ಟಿಗೆ ಮೊದಲು ಕಾಣುವ ಕಟ್ಟಡ ಇಲ್ಲಿಯ ಕೋಟೆ. ಸುಮಾರು 3 ಕಿ.ಮೀ. ಉದ್ದ. 1.5 ಕಿ.ಮೀ ಅಗಲವಿರುವ ಇದಕ್ಕೆ ಒಂಬತ್ತು ಬಾಗಿಲುಗಳಿವೆ. ಇವಕ್ಕೆ ದೆಹಲಿ, ಆಗ್ರಾ, ಬೋಧನ್‍ಪುರ. ಧೋಲ್‍ಪುರ, ಅಜ್ಮೀರ್, ತೇಹ್ರಾ, ಚೋರಾ, ಲಾಲ್, ಬೀರಬಲ್ ಎಂಬ ಹೆಸರುಗಳನ್ನಿಡಲಾಗಿತ್ತು. ಬೀರಬಲನಿಗಾಗಿ ಕಟ್ಟಿಸಿದ ಭವ್ಯ ಮಹಲೂ ಇಲ್ಲಿದೆ. ಪೂರ್ವದಲ್ಲಿರುವ ಆಗ್ರ ಹೆಬ್ಬಾಗಿಲಿನಿಂದ ಕೋಟೆಯನ್ನು ಪಶ್ಚಿಮಾಭಿಮುಖವಾಗಿ ಮುಂದುವರಿದರೆ ರಸ್ತೆಯ ಇಕ್ಕೆಲಗಳಲ್ಲಿ ಅಂದಿನ ಕವಾಯತ್ ಮೈದಾನಗಳೂ ಹೂದೋಟಗಳೂ ಕಾಣುತ್ತವೆ. ಮುಂದೆ ಸಿಕ್ಕುವ ಕಟ್ಟಡಗಳಲ್ಲಿ ಮೊದಲನೆಯದು ನೌಬತ್‍ಖಾನಾ (ವಾದ್ಯಗೋಷ್ಠಿ ಮಂಟಪ). ಎದುರಿಗೆ ವಿಶಾಲವಾದ ದಿವಾನ್-ಇ-ಅಮ್ ಸಾರ್ವಜನಿಕ ದರ್ಬಾರು ಭವನ. ಮುಂದೆ ಎಡಗಡೆಗೆ ಚಕ್ರವರ್ತಿಯ ಅರಮನೆ. ಪಕ್ಕದಲ್ಲಿ ಖವ್ವಾಜ್‍ಗಾಹ್ (ಅಂತಃಪುರ, ಶಯ್ಯಾಗೃಹ), ಅದರ ಹಿಂದೆ ದಕ್ಷಿಣಕ್ಕೆ ದಫ್ತರ್‍ಖಾನಾ. ಅದರ ಎದುರಿಗೆ ಒಂದು ಕೊಳ. ಇದಕ್ಕೆ ನೀರನ್ನು ತುಂಬಲೂ ಇದರಿಂದ ಬಿಡಲೂ ವ್ಯವಸ್ಥೆಯಿದೆ. ಈ ಕೊಳದ ಮಧ್ಯದಲ್ಲೊಂದು ಪೀಠ. ನಾಲ್ಕು ಪಕ್ಕಗಳಿಂದಲೂ ಅಲ್ಲಿಗೆ ಹೋಗಲು ಕಿರು ಸೇತುವೆ ದಾರಿ. ಅದರಲ್ಲಿ ತಾನ್‍ಸೇನ್ ಕುಳಿತು ಹಾಡುತ್ತಿದ್ದನೆನ್ನಲಾಗಿದೆ. ಕಛೇರಿಯ ಮೇಲಿನ ಅಂತಸ್ತಿನಲ್ಲಿ ಅಲ್ಲಿರುವ ಕಮಾನು ಮಂಟಪಾಕೃತಿಗಳ ಅಡಿಯಲ್ಲಿ ಕುಳಿತು ಈ ಸಂಗೀತವನ್ನು ಕೇಳಬಹುದಾಗಿತ್ತು.

	ಇಲ್ಲಿಂದ ವಾಯುವ್ಯಕ್ಕಿರುವ ವಿಶಾಲ ಪ್ರಾಂಗಣದಲ್ಲಿ ಒಂದು ನುಣುಪುಗಲ್ಲಿನ ಮಂಚವಿದೆ. ಇದರ ಮೇಲೆ ಅಕ್ಬರ್ ಕುಳಿತುಕೊಳ್ಳುತ್ತಿದ್ದ. ಎದುರುಗಡೆ ಬೃಹತ್ತಾದ ಪಗಡೆಹಾಸೊಂದನ್ನು ಕಲ್ಲುಚಪ್ಪಡಿಯ ನೆಲದ ಮೇಲೆ ಬಿಡಿಸಿದ್ದಾರೆ. ಪಗಡೆಕಾಯಿಗಳಂತೆ ಬಣ್ಣಬಣ್ಣದ ಉಡುಪು ಧರಿಸಿದ ಸುಂದರಿಯರು ಆ ಪಗಡೆಹಾಸಿನ ಮನೆಗಳ ಮೇಲೆ ನಿಂತು ದಾಳಗಳ ಬೀಳುವಿಕೆಯ ತಾಳಕ್ಕೆ ತಕ್ಕಂತೆ ಮನೆಯಿಂದ ಮನೆಗೆ ಚಲಿಸುತ್ತಿದ್ದರು. ಶಾಂತಿಕಾಲದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಖಾನರುಗಳ, ದರ್ಬಾರಿಗಳ ದೊಡ್ಡ ಸಮೂಹ ಪ್ರೇಕ್ಷಿಸಲು ತಕ್ಕಂತೆ ಈ ಅಂಗಳ ವಿಶಾಲವಾಗಿದೆ.

	ಈ ಪಗಡೆ ಹಾಸಿನ ದಕ್ಷಿಣಕ್ಕೆ ಬಾಲಕಿಯರ ಪಾಠಶಾಲೆ. ಅಲ್ಲಿಂದ ಪಶ್ಚಿಮಕ್ಕೆ ಪ್ರಸಿದ್ಧವಾದ ಪಂಚಮಹಲು. ಇದು ಐದು ಅಂತಸ್ತುಗಳ ಭವನ. ಅಂತಸ್ತಿನಿಂದ ಅಂತಸ್ತಿಗೆ ಮಂಟಪದ ಕಂಬಗಳ ಹಾಗೂ ಅಂಕಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಮೊದಲನೆಯ ಅಂತಸ್ತಿನಲ್ಲಿ 84 ಕಂಬಗಳಿದ್ದರೆ, ಐದನೆಯದರಲ್ಲಿ ಕೇವಲ ನಾಲ್ಕು ಕಂಬಗಳಿವೆ. ಅದೊಂದು ಕಿರು ಮಂಟಪ. ಫತೇಹ್‍ಪುರದಲ್ಲಿ ಇದಕ್ಕಿಂತ ಎತ್ತರದ ಕಟ್ಟಡ ಇಲ್ಲ.

	ಪಗಡೆಹಾಸಿನ ವಿಶಾಲವಾದ ಅಂಗಳಕ್ಕೆ ಉತ್ತರದಲ್ಲಿ ಎರಡಂತಸ್ತುಗಳ ಕಟ್ಟಡವಿದೆ. ಇದು ದಿವಾನ್-ಇ-ಖಾಸ್, ದರ್ಬಾರುಭವನ. ಚೌಕಾಕಾರದ ಇದರ ನಾಲ್ಕು ಕಡೆಗಳಲ್ಲೂ ಬಾಗಿಲುಗಳೂ ಜಾಲಂಧ್ರಗಳಿರುವ ಕಲ್ಲಿನ ಕಿಟಕಿಗಳೂ ಇದ್ದು ಮಧ್ಯದಲ್ಲಿ ಒಂದು ದೊಡ್ಡ ಕಂಬವಿದೆ. ಈ ಕಂಬದ ಸುತ್ತಲೂ ಕೋನಾಕೃತಿಯಲ್ಲಿ ಅಲಗುಗಳಂತಹ ಕೆತ್ತನೆಯ ಕೆಲಸವಿದೆ. ಮೇಲೆ ಸುಮಾರು 3 ಮೀ. ವ್ಯಾಸ ವೃತ್ತಾಕಾರದ ರಚನೆಯಿದೆ. ಇದಕ್ಕೆ ಸುತ್ತಲೂ ಕಲ್ಲಿನಲ್ಲಿ ಕೆತ್ತಿದ ಅಲಂಕೃತ ಲತಾವಿನ್ಯಾಸವುಳ್ಳ ಕೈಪಿಡಿಯಿದೆ. ಈ ವರ್ತುಲವನ್ನು ನಾಲ್ಕೂಕಡೆಗಳಿಂದ ನಾಲ್ಕು ಕಿರುದಾರಿಗಳು ಬಂದು ಸಂಧಿಸುತ್ತವೆ. ಇಲ್ಲಿ ಅಕ್ಬರ್ ಚಕ್ರವರ್ತಿ ಮಂಡಿಸುತ್ತಿದ್ದ. ಒಳಗಡೆ ಸುತ್ತಲೂ ಈ ಕಂಬದ ಎತ್ತರಕ್ಕೆ ಉಪ್ಪರಿಗೆಯ ಮೊಗಸಾಲೆಯಿದೆ. ಅಲ್ಲಿ ನಾಲ್ಕು ಪೀಠಗಳ ವ್ಯವಸ್ಥೆಯುಂಟು. ಇಲ್ಲಿ ಅಕ್ಬರ್ ತನ್ನ ಅಂತರಂಗದ ಸಲಹೆಗಾರರಾದ ಅಬ್ದುಲ್ ಫಸಲ್, ಅಬ್ದುಲ್ ಫೈಸಿ, ಖಾನ್ ಖಾನಾನ್, ಬೈರಾಮ್-ಖಾನ್ ಮತ್ತು ಬೀರಬಲ್ ಮುಂತಾದವರೊಡನೆ ಮಂತ್ರಾಲೋಚನೆ ಮಾಡುತ್ತಿದ್ದನೆಂದು ಹೇಳಲಾಗಿದೆ. ದಿವಾನ್-ಇ-ಖಾಸ್‍ನಲ್ಲಿರುವ ಸಿಂಹಾಸನ, ಕಂಬ ಒಂದು ವಿಶಿಷ್ಟ ಕಲಾತ್ಮಕ ರಚನೆ.

	ಪಂಚಮಹಲಿನ ಪಶ್ಚಿಮಕ್ಕೆ ಮಸೀದಿ, ಪಾಠಶಾಲೆ, ಸ್ನಾನಗೃಹಗಳು, ಆಸ್ಪತ್ರೆ, ಅಶ್ವಶಾಲೆ, ಗಜಶಾಲೆ ಮುಂತಾದುವು ಇದ್ದುವು.

ಇಲ್ಲಿಂದ ನೈಋತ್ಯಕ್ಕೆ ಸಿಗುವುದು ಮರಿಯಂ ದಾದಿಯ ಭವನ. ಪಶ್ಚಿಮಾಭಿಮುಖವಾಗಿರುವ ಇದು ಒಂದು ಸುಂದರ ಕಟ್ಟಡ. ಪಕ್ಕದಲ್ಲೇ ಅಕ್ಬರನ ರಜಪೂತ ರಾಣಿ ಜೋಧಾಬಾಯಿಯ ವಿಶಾಲವೂ ಭವ್ಯವೂ ಅದ ಎರಡಂತಸ್ತುಗಳ ಅರಮನೆಯಿದೆ. ವಿಶಾಲವಾದ ಹೊರಹೆಬ್ಬಾಗಿಲಿನಿಂದ ಒಳಹೊಕ್ಕ ಕೂಡಲೇ ದೊಡ್ಡ ಅಂಗಳ ಉತ್ತರಭಾಗದ ಮೇಲಂತಸ್ತಿನಲ್ಲಿ ಹವಾಮಹಲ್. ವಿಶಾಲವಾದ ಕೆರೆಯ ಮೇಲಿಂದ ಬೀಸಿಬರುವ ತಂಗಾಳಿಯನ್ನು ಇಲ್ಲಿ ಕುಳಿತು ಸವಿಯಬಹುದಾಗಿತ್ತು. 1570ರಲ್ಲಿ ಕಟ್ಟಿದ ಇದು ಇನ್ನೂ ಪೂರ್ವಸ್ಥಿತಿಯಲ್ಲಿದೆ.
ಈ ಅರಮನೆಯಿಂದ ಪಶ್ಚಿಮಕ್ಕೆ ರಾಜಾ ಬೀರಬಲನ ಅರಮನೆ. ಅಬುಲ್ ಫಸಲನ ಭವನ, ದಾರೋಹನ ಮನೆ ಮತ್ತು ಸಂಗೀತ್ ಮುರ್ಜ್ ಇವೆ. ಆಯತಾಕಾರದ ಇವು ಎರಡಂತಸ್ತುಗಳ ಕಟ್ಟಡಗಳಾಗಿವೆ. ಇವುಗಳದು ಹಿಂದೂ ಮತ್ತು ಪಠಾಣ ಸಂಮಿಶ್ರ ಶೈಲಿ.

	ಇಂದೂ ಫತೇಹ್‍ಪುರದಲ್ಲಿ ಜೀವಕಳೆಯಿಂದ ತುಂಬಿರುವ ಕಟ್ಟಡವೆಂದರೆ ಇಲ್ಲಿಯ ಜಾಮಿ ಮಸೀದಿ ಮತ್ತು ಅದರೊಳಗಿರುವ ಅಮೃತಶಿಲೆಯ ಹಜರತ್ ಷೇಕ್ ಸಲೀಮ್ ಚಿಷ್ತಿಯ ಗೋರಿ. ಇಲ್ಲಿರುವ ಕಟ್ಟಡಗಳಲ್ಲೆಲ್ಲ ಇದೇ ಅತ್ಯಂತ ದೊಡ್ಡದು. ಇಲ್ಲಿಯ ಅಂಗಳದಲ್ಲಿ ಹತ್ತುಸಾವಿರ ಭಕ್ತರು ಮಂಡಿಯೂರಿ ಕುಳಿತು ಪ್ರಾರ್ಥನೆ ಸಲ್ಲಿಸಬಹುದು. 1575ರ ಸುಮಾರಿನಲ್ಲಿ ಕಟ್ಟಿದ ಈ ಕಟ್ಟಡಕ್ಕೆ ಆಗಲೇ ಐದು ಲಕ್ಷ ರೂಪಾಯಿಗಳು ಖರ್ಚಾದುವೆನ್ನಲಾಗಿದೆ. ಸಲೀಮ್ ಚಿಷ್ತಿಯ ಗೋರಿ ಅಂಗಳದ ಉತ್ತರಭಾಗದಲ್ಲಿದೆ. ಗೋರಿ, ಸುತ್ತಲ ಕಂಬಗಳು, ಅವನ್ನು ಕೂಡಿಸುವ ಕೈಪಿಡಿಗೋಡೆ, ಮೇಲಿನ ಮಂಟಪ, ಅದರ ಗುಮ್ಮಟ-ಎಲ್ಲವೂ ರತ್ನಗಲ್ಲುಗಳ ಲತಾವಿನ್ಯಾಸಗಳಿಂದಲೂ ಜಾಲಂಧ್ರಗಳಿಂದಲೂ ಅಲಂಕೃತವಾಗಿವೆ. ಸುತ್ತಲೂ ಕೆಂಪುಗಲ್ಲಿನಿಂದ ಕಟ್ಟಲಾಗಿರುವ ಈ ಭವ್ಯ ಮಂದಿರಕ್ಕೆ ವಿಶಾಲವಾದ ಹಾಲುಗಲ್ಲಿನ ಹಾಸಿನ ಅಂಗಣವಿದೆ. ಇಂದಿಗೂ ಎಲ್ಲ ಮತಗಳ ಭಕ್ತರು ಆ ಮುಸ್ಲಿಂ ಸಂತನಿಗೆ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.

	ಕೋಟೆಯ ನೈಋತ್ಯ ಮೂಲೆಯಲ್ಲಿ ಬುಲಂದ್ ದರ್ವಾಜಾ (ವಿಜಯದ್ವಾರ) ಎಂಬ ಮಹಾದ್ವಾರವಿದೆ. ಇದು ರಾಕ್ಷಸಾಕಾರದ ಕಲಾಮಯ ಕೃತಿ. ಇದು ಮಸೀದಿಯ ದಕ್ಷಿಣದ ಬಾಗಿಲು. 1573ರಲ್ಲಿ ಅಕ್ಬರ್ ಗುಜರಾತ್ ಪ್ರಾಂತ್ಯವನ್ನು ಗೆದ್ದ ನೆನಪಿಗಾಗಿ 1575ರಲ್ಲಿ ಇದನ್ನು ಕಟ್ಟಲಾಯಿತೆನ್ನಲಾಗಿದೆ. ಇದೊಂದು ಮಹಾವಾಸ್ತು ನಿರ್ಮಾಣ. ಮೆಟ್ಟಿಲುಗಳನ್ನೇರಿ ಸುಮಾರು 10 ಮೀ. ಎತ್ತರಕ್ಕೆ ಹೋದರೆ ಅಲ್ಲಿಂದ ಸುಮಾರು 41 ಮೀ. ಎತ್ತರಕ್ಕೆ ಇದು ಏರಿದೆ.

	1570ರಲ್ಲಿ 1586ರ ತನಕ ಅಕ್ಬರ್ ಈ ಕೆಂಪು ನಗರಿಯಲ್ಲಿ ವಾಸವಾಗಿದ್ದ.

	ಇಲ್ಲಿ ಸಾಸೆನಿಯನ್, ಪರ್ಷಿಯನ್ ಮತ್ತು ಭಾರತೀಯ ಹಿಂದೂ ಶೈಲಿಯ ವಾಸ್ತುಶಿಲ್ಪ ಮತ್ತು ಕಲೆಗಳ ಮಧುರಸಂಮಿಶ್ರಣದಿಂದ ಮೊಗಲ್ ಶೈಲಿ ರೂಪುಗೊಂಡಿತು. ಕೆಂಪು ಮರಳುಗಲ್ಲಿನಿಂದ ಕಟ್ಟಿದ ಪ್ರತಿಯೊಂದು ಕಟ್ಟಡದ ಮಹಾದ್ವಾರ, ಕಮಾನುಗಳು, ಭವನಗಳು, ಕಂಬಗಳು, ಕಿಟಕಿಗಳು, ಬೋದಿಗೆಗಳು, ಪೀಠಾಲಂಕಾರ, ಕಾರ್ನೀಸು, ಚಜ್ಜ, ಗೋಪುರ ಮತ್ತು ಗುಮ್ಮಟ ಇವುಗಳಲ್ಲಿ ಈ ಶೈಲಿಯನ್ನು ಗುರುತಿಸಬಹುದು.

	ಆದರೆ ಫತೇಹ್‍ಪುರ ಸಿಕ್ರಿ ಮೊಗಲರ ರಾಜಧಾನಿಯಾಗಿ ಬಹುಕಾಲ ಮುಂದುವರಿಯಲಿಲ್ಲ. ನೀರಿನ ಅಭಾವ, ಅನಾರೋಗ್ಯ ಮುಂತಾದ ಕಾರಣಗಳಿಂದಾಗಿ ಅಕ್ಬರ್ ಅದನ್ನು 1584ರಲ್ಲಿ ತೊರೆದನೆನ್ನಲಾಗಿದೆ. ಗುರುವಾದ ಸಂತ ಸಲೀಮ್ ಚಿಷ್ತಿಯ ಶಾಂತಿಗೆ ಭಂಗವಾಗದಿರಲೆಂದು ಅವನು ರಾಜಧಾನಿಯನ್ನು ಇಲ್ಲಿಂದ ಬದಲಾಯಿಸಿದ್ದನೆಂದೂ ಐತಿಹ್ಯವುಂಟು.		    (ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ